 ೧ - ಮಂಗಳಾಚರಣ ಸಂಧಿ

ಹರಿಕಥಾಮೃತಸಾರ ಗುರುಗಳ |
ಕರುಣದಿಂದಾಪನಿತು ಪೇಳುವೆ |
ಪರಮಭಗವದ್ಭಕ್ತರಿದನಾದರದಿ ಕೇಳುವುದು ||

ಶ್ರೀರಮಣಿಕರಕಮಲಪೂಜಿತ |
ಚಾರುಚರಣಸರೋಜ ಬ್ರಹ್ಮಸ |
ಮೀರವಾಣಿ ಫಣೀಂದ್ರ ವೀಂದ್ರ ಭವೇಂದ್ರ ಮುಖವಿನುತ ||
ನೀರಜಭವಾಂಡೋದಯಸ್ಥಿತಿ |
ಕಾರಣನೆ ಕೈವಲ್ಯದಾಯಕ |
ನಾರಸಿಂಹನೆ ನಮಿಪೆ ಕರುಣಿಪುದೆಮಗೆ ಮಂಗಳವಾ || ೧ ||

ಜಗದುದರನತಿ ವಿಮಲಗುಣರೂ |
ಪಗಳನಾಲೋಚನದಿ ಭಾರತ |
ನಿಗಮತತಿಗಳತಿಕ್ರಮಿಸಿ ಕ್ರಿಯಾವಿಶೇಷಗಳ ||
ಬಗೆಬಗೆಯ ನೂತನವ ಕಾಣುತ |
ಮಿಗೆ ಹರುಷದಿಂ ಪೊಗಳಿ ಹಿಗ್ಗುವ |
ತ್ರಿಗುಣಮಾನಿ ಮಹಾಲಕುಮಿ ಸಂತೈಸಲನುದಿನವು  || ೨ ||

ನಿರುಪಮಾನಂದಾತ್ಮಭವ ನಿ |
ರ್ಜರಸಭಾಸಂಸೇವ್ಯ  ಋಜುಗಣ |
ದರಸೆ ಸತ್ತ್ವ ಪ್ರಚುರ ವಾಣೀಮುಖಸರೋಜೇನ ||
ಗರುಡಶೇಷಶಶಾಂಕದಳಶೇ |
ಖರರ ಜನಕ ಜಗದ್ಗುರುವೇ ತ್ವ |
ಚ್ಚರಣಗಳಿಗಭಿವಂದಿಸುವೆ ಪಾಲಿಪುದು ಸನ್ಮತಿಯ  || ೩  ||

ಆರು ಮೂರೆರಡೊಂದು ಸಾವಿರ |
ಮೂರೆರಡು ಶತಶ್ವಾಸ ಜಪಗಳ |
ಮೂರುವಿಧ ಜೀವರೊಳಗಬ್ಜಜಕಲ್ಪಪರಿಯಂತ ||
ತಾ ರಚಿಸಿ ಸಾತ್ತ್ವರಿಗೆ ಸುಖ ಸಂ |
ಸಾರ ಮಿಶ್ರರಿಗಧಮಜನರಿಗ |
ಪಾರ ದುಃಖಗಳೀವ ಗುರು ಪವಮಾನ ಸಲಹೆಮ್ಮ  || ೪  ||

ಚತುರವದನನ ರಾಣಿ ಅತಿರೋ |
ಹಿತ ವಿಮಲ ವಿಜ್ಞಾನಿ ನಿಗಮ |
ಪ್ರತತಿಗಳಿಗಭಿಮಾನಿ ವೀಣಾಪಾಣಿ ಬ್ರಹ್ಮಾಣಿ  ||
ನತಿಸಿ ಬೇಡುವೆ ಜನನಿ ಲಕ್ಷ್ಮೀ |
ಪತಿಯ ಗುಣಗಳ ತುತಿಪುದಕೆ ಸ |
ನ್ಮತಿಯ ಪಾಲಿಸಿ ನೆಲೆಸು ನೀ ಮದ್ವದನ ಸದನದಲಿ  || ೫  ||

ಕೃತಿರಮಣ ಪ್ರದ್ಯುಮ್ನನಂದನೆ |
ಚತುರವಿಶಂತಿ ತತ್ತ್ವಪತಿ ದೇ |
ವತೆಗಳಿಗೆ ಗುರುವೆನಿಸುತಿಹ ಮಾರುತನ ನಿಜಪತ್ನಿ  ||
ಸತತ ಹರಿಯಲಿ ಗುರುಗಳಲಿ ಸ |
ದ್ರತಿಯ ಪಾಲಿಸಿ ಭಾಗವತ ಭಾ |
ರತಪುರಾಣರಹಸ್ಯ ತತ್ತ್ವಗಳರುಪು ಕರುಣದಲಿ  || ೬ ||

ವೇದಪೀಠ ವಿರಿಂಛಿ ಭವ ಶ |
ಕ್ರಾದಿ ಸುರ ವಿಜ್ಞಾನದಾಯಕ |
ಮೋದ ಚಿನ್ಮಯಗಾತ್ರ ಲೋಕಪವಿತ್ರ ಸುಚರಿತ್ರ  ||
ಛೇದ ಭೇದ ವಿಷಾದ ಕುಟಿಲಾಂ |
ತಾದಿ ಮಧ್ಯ ವಿದೂರ ಆದಾ |
ನಾದಿ ಕಾರಣ ಬಾದರಾಯಣ ಪಾಹಿ ಸತ್ರಾಣ  || ೭ ||

ಕ್ಷಿತಿಯೊಳಗೆ ಮಣಿಮಂತ ಮೊದಲಾ |
ದತಿ ದುರಾತ್ಮರು ಒಂದಧಿಕ ವಿಂ |
ಶತಿ ಕುಭಾಷ್ಯವ ರಚಿಸೆ ನಡುಮನೆಯೆಂಬ ಬ್ರಾಹ್ಮಣನ ||
ಸತಿಯ ಜಠರದೊಳವತರಿಸಿ ಭಾ |
ರತಿ ರಮಣ ಮಧ್ವಾಭಿಧಾನದಿ |
ಚತುರದಶ ಲೋಕದಲಿ ಮೆರೆದಪ್ರತಿಮಗೊಂದಿಸುವೆ  || ೮ ||

ಪಂಛ ಭೇದಾತ್ಮಕ ಪ್ರಪಂಛಕೆ |
ಪಂಚರೂಪಾತ್ಮಕನೆ ದೈವಕ |
ಪಂಚಮುಖ ಶಕ್ರಾದಿಗಳು ಕಿಂಕರರು ಶ್ರೀಹರಿಗೆ ||
ಪಂಚವಿಂಶತಿ ತತ್ತ್ವ ತರತಮ |
ಪಂಛಿಕೆಗಳನು ಪೇಳ್ದ ಭಾವಿ ವಿ |
ರಿಂಛಿಯೆನಿಪಾನಂದತೀರ್ಥರ ನೆನೆವೆನನುದಿನವು  || ೯ ||

ವಾಮದೇವ ವಿರಿಂಚಿತನಯ ಉ |
ಮಾ ಮನೋಹರ ಉಗ್ರ ಧೂರ್ಜಟಿ |
ಸಾಮಜಾಜಿನವಸನ ಭೂಷಣ ಸುಮನಸೋತ್ತಂಸ  ||
ಕಾಮಹರ ಕೈಲಾಸ ಮಂದಿರ |
ಸೋಮಸೂರ್ಯಾನಲ ವಿಲೋಚನ |
ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಳವ  || ೧೦ ||

ಕೃತ್ತಿವಾಸನೆ ಹಿಂದೆ ನೀ ನಾ |
ಲ್ವತ್ತು ಕಲ್ಪ ಸಮೀರನಲಿ ಶಿ |
ಷ್ಯತ್ವ ವಹಿಸ್ಯಖಿಳಾಗಮಾರ್ಥಗಳೋದಿ ಜಲಧಿಯೊಳು ||
ಹತ್ತು ಕಲ್ಪದಿ ತಪವಗೈದಾ |
ದಿತ್ಯರೊಳಗುತ್ತಮನೆನಿಸಿ ಪುರು |
ಷೋತ್ತಮನ ಪರಿಯಂಕ ಪದವೈದಿದೆಯೊ ಮಹದೇವ  || ೧೧ ||

ಪಾಕಶಾಸನ ಮುಖ್ಯ ಸಕಲ ದಿ |